ಅತೀಶ ದೀಪಂಕರ
(982-1054). ಟಿಬೆಟ್ಟಿನ ಸಾಂಸ್ಕøತಿಕ ಚರಿತ್ರೆಯಲ್ಲಿ ಇವನ ಹೆಸರು ಚಿರಸ್ಥಾಯಿಯಾಗಿದೆ. ಬುದ್ಧ ಮತ್ತು ಪದ್ಮಸಂಭವರನ್ನು ಬಿಟ್ಟರೆ, ಇವನೇ ಅತ್ಯಂತ ಪ್ರತಿಭಾವಂತ ವ್ಯಕ್ತಿ. ಈತ ಪೂರ್ವಭಾರತದಲ್ಲಿ ಜನಿಸಿದ. ಬಾಲ್ಯದಿಂದಲೇ ಧಾರ್ಮಿಕ ವಿಷಯಗಳಲ್ಲಿ ಇವನಿಗೆ ವಿಶೇಷ ಆಸಕ್ತಿ ಇತ್ತು. ನಲಂದ ವಿಶ್ವವಿದ್ಯಾನಿಲಯದಲ್ಲಿ ಬೋಧಿಭದ್ರನಿಂದ ದೀಕ್ಷೆಪಡೆದ. ದೀಪಂಕರ  ಶ್ರೀಜ್ಞಾನ ಎಂಬ ಹೆಸರಿನಿಂದ ಪ್ರಖ್ಯಾತನಾದ. ಅನಂತರ ವಜ್ರಾಸನ ಮಹಾವಿಹಾರಕ್ಕೆ ಹೋಗಿ ಶೀಲರಕ್ಷಿತನಲ್ಲಿ ವಿನಯಪಿಟಕಗಳ ಅಧ್ಯಯನವನ್ನು ನಡೆಸಿದ. ಆದರೂ ಅವನ ಜ್ಞಾನ ತೃಷೆ ಕಡಿಮೆಯಾಗಲಿಲ್ಲ. ಸುವರ್ಣದ್ವೀಪಕ್ಕೆ ಹೋಗಿ ಧರ್ಮಪಾಲನೆಂಬ ಪಂಡಿತನ ಆಶ್ರಯದಲ್ಲಿ ತಾಂತ್ರಿಕ ಗ್ರಂಥಗಳನ್ನು ಹನ್ನೆರಡುವರ್ಷ ಅಭ್ಯಾಸಮಾಡಿ, ಹಿಂದಿರುಗಿ ವಿಕ್ರಮಶೀಲ ವಿಶ್ವವಿದ್ಯಾನಿಲಯವನ್ನು ಸೇರಿದ. ಜ್ಞಾನಪ್ರಭನೆಂಬ ವಿದ್ವಾಂಸನ ಆಶಯದಂತೆ ಟಿಬೆಟ್ಟಿಗೆ ಹೋಗಿ ಬೌದ್ಧಗ್ರಂಥಗಳನ್ನು ಸಂಪಾದಿಸುವ ಮತ್ತು ಭಾಷಾಂತರಿಸುವ ಮಹಾಕಾರ್ಯವನ್ನು ಕೈಗೊಂಡ. ಸಂಸ್ಕøತದಿಂದ ಟಿಬೆಟ್ ಭಾಷೆಗೆ ಅನುವಾದ ಮಾಡಿರುವ ಇವನ ಗ್ರಂಥಗಳು ಕಾಂಜೂರ್ ಎಂಬ ಟಿಬೆಟ್ಟಿನ ತ್ರಿಪಿಟಕದಲ್ಲಿ ಸೇರಿವೆ. ಸಾಮ್ಯೆ ಎಂಬ ವಿಹಾರದಲ್ಲಿ ಅತ್ಯಮ್ಯೂಲವಾದ ಬೌದ್ಧಗ್ರಂಥಗಳ ಭಂಡಾರ ಸ್ಥಾಪಿತವಾಯಿತು. ಇಲ್ಲಿಯೇ ಕಾಲಚಕ್ರ ಎಂಬ ಬೃಹದ್ಗ್ರಂಥಕ್ಕೆ ವ್ಯಾಖ್ಯಾನವನ್ನು ಬರೆದ. ಟಿಬೆಟ್ಟಿನಲ್ಲಿ ಮೊದಲಿಂದ ಇದ್ದ ಭೂತಾರಾಧನೆಯ ಪಂಥದಿಂದ ಬೌದ್ಧಮತ ಖಿಲವಾಗುತ್ತಿದ್ದುದನ್ನು ಗಮನಿಸಿ ವಿನಯವೂ ಧರ್ಮವೂ ಉಳಿಯುವಂತೆ ಭಾರತೀಯ ದೃಷ್ಟಿಗನುಗುಣವಾದ ಆಚಾರ ವ್ಯವಹಾರಗಳನ್ನೊಳಗೊಂಡ ಮಠವೊಂದನ್ನು ಏರ್ಪಡಿಸಿದ. ಮೊದಲಿಗೆ ವಿನಯ ಪಂಥವೆಂದು ಹೆಸರುಗೊಂಡ ಈ ಶಾಖೆ ಕಾಲಾಂತರದಲ್ಲಿ ಪೀತಮುಕುಟಪಂಥವೆಂದು ಪ್ರಸಿದ್ಧವಾಯಿತು. ಈ ಶಾಖೆ ಟಿಬೆಟ್ಟಿನಲ್ಲಿ ಇಂದಿಗೂ ಇದೆ. ಮುಂದೆ ಮಾರ್ಪ, ಮಿಲರೇಪ ಎಂಬುವರು ಈ ಶಾಖೆಯನ್ನು ಬೆಳೆಸಿದರು. ಅತೀಶನಿಂದಾಗಿ ಬೌದ್ಧಮತದಲ್ಲಿ ಬ್ರಹ್ಮಚರ್ಯದ ಅನುಷ್ಠಾನ ಏರ್ಪಟ್ಟಿತಲ್ಲದೆ ತಾಂತ್ರಿಕವಿಧಿಗಳ ವಿಸರ್ಜನೆಯಾಯಿತು. ಅತೀಶಲ್ಹಾಸ ಬಳಿ ನೆಕಾಂಗ್ ಎಂಬಲ್ಲಿ ತೀರಿಕೊಂಡ. ಅಲ್ಲಿ ಅವರ ಸಮಾಧಿ ಇದೆ. 						
(ಎಸ್.ಕೆ.ಆರ್.; ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ